ಗ್ವಾನಕೋ
-	ಆರ್ಟಿಯೊಡ್ಯಾಕ್ಟಿಲ ಗಣದ ಕಮೆಲಿಡೀ ಕುಟುಂಬಕ್ಕೆ ಸೇರಿದ ಒಂದು ಸಸ್ತನಿ. ಅಲ್ಪಾಕ, ಲಾಮಗಳ ಹತ್ತಿರ ಸಂಬಂಧಿ. ಲಾಮಗ್ವಾನಕೀ ಇದರ ವ್ಶೆಜ್ಞಾನಿಕ ನಾಮ. ದಕ್ಷಿಣ ಅಮೆರಿಕದ ಪಶ್ವಿಮ ಮತ್ತು ದಕ್ಷಿಣ ಭಾಗಗಳ ಬೆಟ್ಟಗಳಲ್ಲಿ ಕಾಣಬರುತ್ತದೆ. ಪೆರುವಿನಿಂದ ಹಿಡಿದು ಕೇಪ್ ಹಾರ್ನ್‍ವರೆಗೆ ಇದರ ವ್ಯಾಪ್ತಿ ಇದೆ. ಸುಮಾರು 4' ಎತ್ತರದ ಪ್ರಾಣಿಯದು. ದೇಹದ ಉದ್ದ 4'-5'. ತೂಕ 48-96 ಕೆ.ಜಿ. ದೇಹದ ಮೇಲೆಲ್ಲಾ ತುಪ್ಪಳದಂಥ ಕೂದಲುಗಳ ಹೊದಿಕೆಯಿದೆ. ಇದರ ಬಣ್ಣ ತಿಳಿ ಕಂದು. ಉದರ ಭಾಗ ಬೆಳ್ಳಗಿದೆ. ಮುಖ ಮಾತ್ರ ಸ್ವಲ್ಪ ಕಪ್ಪು ಬಣ್ಣದ್ದು. ಕತ್ತು ಒಂಟೆ ಲಾಮಗಳಲ್ಲಿರುವಂತೆ ಇದೆ. ಕಾಲುಗಳು ತೆಳುವಾಗಿಯೂ ಉದ್ದವಾಗಿಯೂ ಇವೆ. ಹುಲ್ಲು ಇದರ ಪ್ರಧಾನ ಆಹಾರ.

ಗ್ವಾನಕೋ ಸಂಘಜೀವಿ 10-30ರ ಗುಂಪುಗಳಲ್ಲಿ ವಾಸಿಸುತ್ತದೆ. ಗುಂಪಿನಲ್ಲಿ ಒಂದೇ ಒಂದು ಗಂಡು ಇರುತ್ತದೆ. ಇವು ಬಲುವೇಗವಾಗಿ ಓಡಬಲ್ಲವು (50 ಞmh) ಚೆನ್ನಾಗಿ ಈಜಲೂ ಬಲ್ಲವು. ಇವು ಬಹಳ ಸೂಕ್ಷ್ಮಗ್ರಾಹಿಗಳಾದುದರಿಂದ ಇವನ್ನು ಸಮೀಪಿಸುವುದು ಕಷ್ಟ. ಇವು ಎರಡು ವರ್ಷಕ್ಕೊಮ್ಮೆ ಮರಿ ಹಾಕುತ್ತವೆ. ಗರ್ಭಾವಸ್ಥೆಯ ಅವಧಿ 10-11 ತಿಂಗಳುಗಳು. ಒಂದು ಸಲಕ್ಕೆ ಒಂದೇ ಒಂದು ಮರಿ ಹುಟ್ಟುತ್ತದೆ. ಗ್ವಾನಾಕೋಗಳ ಆಯಸ್ಸು ಸುಮಾರು 20 ವರ್ಷಗಳು. ಗ್ವಾನಕೋಗಳನ್ನು ಮಾಂಸಕ್ಕಾಗಿ, ಚರ್ಮಕ್ಕಾಗಿ ಬೇಟೆಯಾಡುವುದಿದೆ. ಇವನ್ನು ಸಾಕಲೂಬಹುದು. ಪಟಗೋನಿಯದ ಇಂಡಿಯನರು ಇವುಗಳ ಸಗಣಿಯನ್ನು ಉರುವಲಾಗಿ ಬಳಸುತ್ತಾರೆ.

(ಜಿ.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ